ಸೋಮವಾರ, ಅಕ್ಟೋಬರ್ 2, 2017

ಮಳೆಯ ಹಾದಿ

ಪುತ್ತೂರಿನ ಪಕ್ಕದ ಕಾಡಿನಲ್ಲಿರುವ ನನ್ನ  ಸ್ನೇಹಿತೆಯಾದ ಪುಟಾಣಿ ಹುಲಿ ಉರುಫ್ ಅಂಗನವಾಡಿ ರೌಡಿಣಿ ಊರಿಗೆ ಹಬ್ಬಕ್ಕೆ ಹೋಗಿದ್ದೆ ,ಅಲ್ಲಿಂದ ಹಬ್ಬ ಮುಗಿಸಿಕೊಂಡು ಬಸ್ಸಿನಲ್ಲಿ ವಾಪಸ್ಸು ಹೊರಟು ನಮ್ಮೂರಿಗೆ ಸೇರುವವರೆಗೂ ಒಂದೇ ಸಮನೆ ದೋ ಎಂಬಂತ ಆಕಾಶ ಭೂಮಿ ಇಗಾ ಅಗಾ ಎನ್ನುವುದರೊಳಗಾಗಿ ಏಕ ಮಾಡಿಬಿಡಲು ಸತತವಾಗಿ ಪ್ರಯತ್ನಿಸುತ್ತಿದ್ದ ಮಳೆ ಮೂರನೇ ತಾಳಕ್ಕಿಟ್ಟುಕೊಂಡಿತ್ತು.

ಪುತ್ತೂರಿನಿಂದ ಹಾವಿನಂತೆ ಹೊಯ್ದಾಡುತ್ತಾ ಬೇಡವೆಂದರೂ ಬಿಡದೆ ಮುಖಕ್ಕೆರಚುತ್ತಿದ್ದ ಅಗಾಧ ಕಾಡಿನ ನಡುವೆಯೇ ಬಸ್ ಹಾಸನದ ದಾರಿಯಲ್ಲಿ ಹೋಗುತ್ತಿತ್ತು ಅದರ ಮದ್ಯೆ ಪ್ರವಾಸಿಗರ ಕಾರುಗಳಿಂದ ಅಲ್ಲಲ್ಲಿ ಟ್ರಾಫಿಕ್ ಜಾಮ್ ,ಅವರ ಕಾರುಗಳಿಂದ ಎನ್ನುವುದಕ್ಕಿಂತ ಚಾರ್ಮಾಡಿ ಘಾಟಿಯಲ್ಲಿ ಹೋಗುತ್ತಿರುವಾಗ ಎಲ್ಲಿಯೋ ಕೊರಕಲಿನಲ್ಲಿ “ಝಳ್ ಝಳ್ಳಳ್ಳೋ......”ಎಂಬ ನೀರಿನ ಸದ್ದು ಕೇಳಿದರೆ ಸಾಕುಹಾಕು ಗಾಡಿ ಸೈಡಿಗೆಅಂತಾರೆ.

  ಕಾರಿನ ಡ್ರೈವರುಗಳೋ ಸೈಡಿಗೆ ಅಂದರೆ ರಸ್ತೆ ಬದಿಗೆ ಪಾರ್ಕ್ ಮಾಡಬೇಕು ಅಂತ ಅರಿವಿಲ್ಲದೆಯೋ ಏನೋಹಾಕು ಗಾಡಿ ಸೈಡಿಗೆಅಂದದ್ದನ್ನೇ  ತಪ್ಪಾಗಿ ಅರ್ಥೈಸಿಕೊಂಡು ಈಗಾಗಲೇ ಸೈಡಿನಲ್ಲಿ ನಿಂತಿರುವ ಕಾರಿನ ಸೈಡಿಗೆ ಅಂದರೆ ರಸ್ತೆಯಲ್ಲಿಯೇ ಪಾರ್ಕ್ ಮಾಡಿ ಮೊದಲುಝಳ್ಳಳ್ಳೋಎಂದ ಶಬ್ಧದ ಬಂದ ನೀರಿನ ಮೂಲ ಹುಡುಕುತ್ತಾ ಹೊರಟುಬಿಡುತ್ತಾರೆ.

ಕೊರಕಲಿನಲ್ಲಿ ಎಲ್ಲೋ ಝಳ್ಳೆಂದ ನೀರಿನ ಮೂಲ ಹುಡುಕೋಕೆ ಹೋಗಿರುವುದೇ ಟ್ರಾಫಿಕ್ ಜಾಮಿನ ಮೂಲ ಕಾರಣ ಎಂದು ನನಗೆ ನಾನು ಕಂಡು ಹಿಡಕೊಂಡಿದ್ದು ನನಗೆ ಬಹಳ ಖುಷಿಯಾಯ್ತು !

ಆದರೆ ಕೊರಕಲಿನ ಪುಟಾಣಿ ನೀರಿನ ಜಲಪಾತವನ್ನು  ಪುಟಿದೆದ್ದು ಇಷ್ಟಪಟ್ಟು ಕಾರು ನಿಲ್ಲಿಸಲು ಹೇಳುವುದು ಹೆಚ್ಚಾಗಿ ಪುಟಾಣಿ ಮಕ್ಕಳು ಹಾಗೂ ಪುಟಾಣಿ ಹೆಂಗಸರೇ ಆಗಿರುವುದರಿಂದ ಪುಟಾಣಿ ಜಲಪಾತಗಳ ಸುತ್ತಲಿನ ಟ್ರಾಫಿಕ್ ಜಾಮ್ ಕೂಡ ತಂಪಾದ ಮಳೆಯಷ್ಟೇ ಆಪ್ಯಾಯಕರವಾದದ್ದೇ ಸರಿ ಎಂದುಕೊಂಡೆ.


ಅವೆಲ್ಲಾ ಟ್ರಾಫಿಕ್ ಜಾಮನ್ನೂ ಕೂಡ ನಿಭಾಯಿಸಿಕೊಂಡು ನಿಧಾನವಾಗಿ ಬಸ್ ಬಂದು ಹಾಸನದಲ್ಲಿ ಸ್ವಲ್ಪ ಹೊತ್ತು ಸುಧಾರಿಸಿಕೊಂಡು ಮತ್ತೆ ಕೈ ಕಾಲು ಕೊಡವಿಕೊಂಡು ತಿಪಟೂರಿನ ಹಾದಿಯಲ್ಲಿ ತುಮಕೂರಿನ ಕಡೆ ಹೊರಟಿತು ತಿಪಟೂರಿನಲ್ಲಿಯೂ ಮಳೆಯ ಆರ್ಭಟ ಯಥಾಸ್ಥಿತಿ ಕಾಯ್ದುಕೊಂಡಿತ್ತು .

ತಿಪಟೂರಿನಲ್ಲಿ ಬಸ್ ಹತ್ತಿದ ಹಲವರಲ್ಲಿ  ಒಬ್ಬ ಯಜಮಾನನಂತೂ ಸೋರುತ್ತಿರುವ ಬಸ್ ನೋಡಿ ಬೇಸತ್ತುಹೋಗಿ ....ಬಸ್ಸಿನ ಲೇಡಿ ಕಂಡಕ್ಟರಿಗೆಇದೇನವ್ವ ಹಿಂಗೆ ಸೋರುವ ಬಸ್ ತಗಂಡ್ ಬಂದಿದೀಯಲ್ಲವ್ವಾ ? ನೋಡಿ ಒಂದು ಸ್ವಲ್ಪ ಚೆನ್ನಾಗಿರೋ ಬಸ್ಸಾದ್ರೂ ತಗಂಡು ಬರೋದಲ್ವಾಅಂದ.

ನನಗೆ ನಗು ಬಂತುಇದೇನ್ ಕಂಡಕ್ರಮ್ಮಂದ್ ಸ್ಯಾರಿ ಸೆಲೆಕ್ಷನ್ ಏನಯ್ಯಾ ಇದು ! ಕಡೆ ಇರೋ ಹಸುರೂ ಬಣ್ಣದ್ದು  ಬಸ್ ಕೊಡಿ !
ಕಡೆ ಮೂರನೇ  ಕಬೋರ್ಡಲ್ಲಿ ಕಾಣ್ತಿದೆಯಲ್ಲಾ ಆ ಕೆಂಪು ಬಾರ್ಡರಿರೋ ನೀಲಿದು ಬಸ್ ಕೊಡಿ ಸಾ !ಅನ್ನೋಕೆ....ಯೋಯ್ " ಬಸ್ಸು ಕಣಯ್ಯಾ ಇದು ಬಸ್ಸುಅನ್ನೋಣಾಂತ ಇದ್ದೆ ಆದರೆ  ಇವೆಲ್ಲಾ ನನಗ್ಯಾಕೆ ಬೇಕು ಅಂತ ಹಾಗೇ ಸೀಟಿಗೆ ಒರಗಿದೆ.

ಅಯ್ಯೋ ನಾವೇನು ಕೇಳಿದ್ ಬಸ್ ಕೊಡ್ತಾರಾ ಅವರು ಕೊಟ್ಟ ರೂಟಿಗೆ ಅವರೇ ಕೊಟ್ಟ ಬಸ್ ತಗೊಂಡು ಬರೋದು ನಾವು ಅಷ್ಟೇ ಎನ್ನುತ್ತಾ  ಕಂಡಕ್ಟರು ಹಾಗೆ ನಡೆದುಕೊಂಡು ಮುಂದೆ ಹೋಗಿ ಕೂತಳು.

ಅಷ್ಟರಲ್ಲಿ ನನ್ನ ಹಿಂದೆಲ್ಲೋ  ಕೂತಿದವನೊಬ್ಬ ಥೂ ಬಸ್ಸಿನ ಟಾಪು ಸೋರದಂಗೆ ಕರಲು  (ಕರಲು ಮಣ್ಣು ಹಳ್ಳಿಯ ಕಡೆ ಮಾಳಿಗೆ ಮನೆ ಸೋರದಂತೆ ಹಾಕುತ್ತಾರೆ) ಆದ್ರೂ ಹಾಕುಸ್ಕಂಡ್ ಬರಲ್ಲ
ಇವನಮ್ಮನ್ ಮುಂದಿನ ಸಲ ಇಂತವು ಗೌರ್ಮೆಂಟ್ ಬಸ್ ಹತ್ತೋಕೆ ಕೊಡೆ ಹಿಡಕೊಂಡು ಬರಬೇಕೋ ಏನೋಎಂದು ತನ್ನ ಅಸಹನೆಯನ್ನು ಬೇಸರವನ್ನು ಹೊರಹಾಕುತ್ತಾ ತನ್ನ ಭುಜದ ಮೇಲಿದ್ದ ಟವೆಲ್ ತಗೊಂದು ಸೀಟು ಒರೆಸುತ್ತಾ ಕೂತುಕೊಂಡ.


ಇಂತಹಾ ನೈಜ ಜೀವನ ಚಕ್ರಗಳನ್ನು ನೋಡಬೇಕೆಂದರೆ ಸರ್ಕಾರಿ ಬಸ್ಸಿನಲ್ಲಿಯೇ  ಹೋಗಬೇಕೇ ಹೊರತು ಕಾರಿನಲ್ಲಿ ಹೋದರೆ ಅಷ್ಟು ಸಂತೋಷವಿರದು ಎಂದುಕೊಂಡು ಸುರಿವ ಭರ್ತಿ ಮಳೆಯಲ್ಲಿಯೇ ನೆನೆದುಕೊಂಡು  ಮನೆ ತಲುಪಿದಾಗ ರಾತ್ರಿ ಒಂಬತ್ತು ಗಂಟೆಯಾಗಿತ್ತು.

4 ಕಾಮೆಂಟ್‌ಗಳು: